Wine and Divine — 2
ಒಂದೂರಲ್ಲಿ ಒಬ್ಬ ರಾಜ ಇದ್ದ. ಮಹಾ ಕೋಪಿಷ್ಟ. ಎಲ್ಲದಕ್ಕೂ ಸಿಟ್ಟು, ರೇಗಾಡೋದು, ಎದುರಿಗೆ ಇದ್ದವರನ್ನ ಬಯ್ಯೋದು. ಅವನಿಗೆ ಒಬ್ಬ ಒಳ್ಳೆ ಸ್ನೇಹಿತ ಇದ್ದ. ಅವನನ್ನ ಮಾತ್ರ ಚನ್ನಾಗಿ ಮಾತಾಡಿಸುತ್ತಿದ್ದ, ನೋಡಿಕೊಳ್ಳುತ್ತಿದ್ದ. ರಾಜನ ಹೆಸರು ವಿರಾಟ. ಸ್ನೇಹಿತನ ಹೆಸರು ಮಹೇಂದ್ರ.
ಮಹೇಂದ್ರನಿಗೆ ಒಂದು ಅಭ್ಯಾಸ. ಏನೇ ಆದರೂ, “ಒಳ್ಳೇದಾಯಿತು” ಅನ್ನೋದು. ಪೂರ್ವಾಪರ ವಿಮರ್ಶೆ ಮಾಡುತ್ತಲೇ ಇರಲಿಲ್ಲ. ಇದು ಕೆಲವೊಂದು ಸಲ ವಿರಾಟನಿಗೆ ಸಿಟ್ಟು ತರಿಸುತ್ತಿತ್ತು. ಸ್ನೇಹಿತನ ಮೇಲಿನ ಪ್ರೀತಿಯಿಂದ ಸುಮ್ಮನಾಗುತ್ತಿದ್ದ. ತನ್ನ ಜೊತೆಯಲ್ಲಿ ಜಾಸ್ತಿ ಹೊತ್ತು ಸಮಯ ಇರಬೇಕು ಅಂತ ಮಹೇಂದ್ರನಿಗೆ ತನ್ನ ಆಯುಧ ವಿಭಾಗದಲ್ಲಿ ಒಂದು ಕೆಲಸ ಕೊಟ್ಟ. ವಿರಾಟ ರಾಜ ಕಾಡಿಗೆ ಬೇಟೆಗೆ ಹೋಗಬೇಕಾದರೆ, ಬಂದೂಕು ಸಿದ್ಧಪಡಿಸಿ, ಸಿಡಿಮದ್ದು ತುಂಬಿ ತಯ್ಯಾರಿ ಮಾಡುವ ಕೆಲಸ ಮಹೇಂದ್ರನದು.
ಹೀಗೆ ಒಂದು ಬಾರಿ ಬೇಟೆಗೆ ಹೋದಾಗ, ಬಂದೂಕಿನಲ್ಲಿ ಸಿಡಿಮದ್ದಿನ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾಗಿ ಇದ್ದುದರಿಂದ, ಸರಿಯಾದ ಸಮಯದಲ್ಲಿ ಗುಂಡು ಹೊರಬರದೆ, ವಿರಾಟರಾಜನ ಹೆಬ್ಬೆರಳು ತುಂಡಾಗಿ ಹೋಯಿತು. ನೋವಿನಿಂದ ರಾಜ ಕಿರುಚಿದ. ಇದನ್ನು ಕಂಡ ಮಹೇಂದ್ರ “ಒಳ್ಳೇದಾಯಿತು” ಎಂದುಬಿಟ್ಟ.
ಇಂತಹ ಪರಿಸ್ಥಿತಿಯಲ್ಲೂ ಸ್ನೇಹಿತನಿಂದ ಆ ಮಾತನ್ನು ಕೇಳಿ, ಕೋಪಗೊಂಡ ವಿರಾಟ, ಮಹೇಂದ್ರನನ್ನು ಕಾರಾಗೃಹಕ್ಕೆ ಹಾಕಿಸಿದ. ಅವನೊಂದಿಗೆ ಮಾತನ್ನು ಬಿಟ್ಟ. ಸ್ನೇಹಿತ ಒಳ್ಳೇದಾಯಿತು ಎನ್ನುತ್ತಲೇ ಸಜೆ ಅನುಭವಿಸಲು ಆರಂಭಿಸಿದ.
ಸ್ವಲ್ಪ ದಿನಗಳ ನಂತರ ವಿರಾಟ ಮತ್ತೆ ಬೇಟೆಗೆ ಹೊರಟ. ಕಾಡಿನ ಮಧ್ಯದಲ್ಲಿ ದಾರಿ ತಪ್ಪಿದ ರಾಜ ಒಬ್ಬನೇ ಒಂದು ಪ್ರಾಣಿಯ ಬೆನ್ನಟ್ಟಿ ಹೂಗುವಾಗ, ನರಮಾಂಸ ಭಕ್ಷಕರ ಗುಂಪೊಂದಕ್ಕೆ ಸಿಕ್ಕಿಬಿದ್ದ. ರಾಜನ ದಷ್ಟ ಪುಷ್ಟ ಶರೀರವನ್ನು ನೋಡಿ, ಆ ಗುಂಪು ಖುಷಿ ಇಂದ ಕುಣಿದಾಡಿದರು. ಅವರಿಗೆ ಅವರದ್ದೇ ಆದ ಪದ್ಧತಿಗಳು ಇದ್ದವು. ಒಂದು ರೀತಿಯಾಗಿ ಕಾಡಿನಲ್ಲಿ ಇದ್ದೂ ಉತ್ತರಾದಿ ಮಠದ ಮಡಿ ಮೈಲಿಗೆ ಪಾಲಿಸುವ ಹಾಗೆ. ಒಬ್ಬನು ಬಂದು, ರಾಜನಿಗೆ ಕುಡಿಯಲು ನೀರು ಕೊಟ್ಟ. ಮತ್ತೊಬ್ಬ ಬಂದು ತಿನ್ನಲು ಹಣ್ಣು ಕೊಟ್ಟ. ಇಷ್ಟಾದ ಮೇಲೆ ಮುಖಂಡನ ಆದೇಶದಂತೆ ವಿರಾಟನನ್ನು ಮರಕ್ಕೆ ಕಟ್ಟಿ ಹಾಕಿದರು. ಕಚ್ಚೆ ಸೀರೆ ಉಟ್ಟು, ಉದ್ದ ಕುಂಕುಮ ಇಟ್ಟ ಹೆಂಗಸರು 12 ಕೊಡಪಾನ ಮಡಿ ನೀರು ತಂದು ರಾಜನ ಮೇಲೆ ಸುರಿದರು. ಅರಿಶಿನ ಕುಂಕುಮ ಡಬ್ಬಿಗಳನ್ನು ಹಿಡಿದ ಮಹಿಳೆಯರು ಸಾಲಿನಲ್ಲಿ ನಿಂತಿದ್ದರು. ಅವರ ಹಿಂದೆ ಮಡಿ ವಸ್ತ್ರ ಹಿಡಿದು ಮಡಿಯಿಂದ ಮಾತಾಡುತ್ತಿದ್ದ ಮಡಿ ಗಂಡಸರು ನಿಂತಿದ್ದರು. 12ನೇ ಕೊಡಪಾನ ನೀರು ಸುರಿಯುವ ನಾರಿ ಒಂದು ಸಲ “ಹೋ…” ಎಂದು ಕಿರುಚಿದಳು. ಇಡೀ ಜನಾಂಗ ಅಲ್ಲಿ ಬಂದು ಸೇರಿತು. “ಈ ಮನುಷ್ಯನಿಗೆ ಬಲಗೈ ಹೆಬ್ಬೆರಳು ಇಲ್ಲವೇ ಇಲ್ಲ. ದೇಹದ ಯಾವ ಅಂಗಾಂಗಗಳೂ ಮೊಕ್ಕಾಗಿರದ ಮನುಷ್ಯನನ್ನು ಮಾತ್ರ ನಾವು ಸೇವಿಸಬಹುದು. ಸುಮ್ಮನೆ ಮಡಿ ನೀರು ವ್ಯರ್ಥವಾಯಿತು. ಎಂಥವನು ಸಿಕ್ಕಿಬಿಟ್ಟ. ನಾವು ವ್ರತ ಸರಿಯಾಗಿ ಮಾಡುತ್ತಿಲ್ಲವೇನೋ!” ಎಂದಳು. ಅವರ ಮಧ್ಯೆ ಇದ್ದ ವಧಾಪಂಡಿತರು ಇದಕ್ಕೆ ಸಮ್ಮತಿಸಿದರು. ವಿರಾಟ ರಾಜನನ್ನು ಬಿಟ್ಟುಬಿಟ್ಟರು.
ಬದುಕಿದೆ ಬಡ ಜೀವವೇ ಎಂದು ಮನಸಿನಲ್ಲಿ ಹೇಳುತ್ತಾ, ವಿರಾಟ ರಾಜ ಅರಮನೆ ಸೇರಿದ. ತನ್ನ ಸ್ನೇಹಿತ ಹೇಳಿದ ಮಾತು ನೆನಪಾಗಿ ಕಾರಾಗೃಹದ ಕಡೆಗೆ ಓಡಿದ. ನಡೆದ ಘಟನೆ ವಿವರಿಸಿ “ಒಳ್ಳೇದಾಯಿತು” ಎಂದು ನುಡಿದ್ದದ್ದು ನಿಜಕ್ಕೂ ಒಳ್ಳೇದಾಯಿತು, “ನಾನು ನಿನ್ನನ್ನು ಹೀಗೆ ಶಿಕ್ಷಿಸಿ ಕಾರಾಗೃಹಕ್ಕೆ ಹಾಕಿಸಬಾರದಿತ್ತು” ಎಂದು ಕಣ್ಣೀರಿಟ್ಟ. ಮಹೇಂದ್ರ ನಗುತ್ತಾ ಹೇಳಿದ “ಇಲ್ಲ ವಿರಾಟ, ನೀನು ನನ್ನನ್ನು ಹೀಗೆ ಕಾರಾಗೃಹಕ್ಕೆ ಹಾಕಿದ್ದು ಒಳ್ಳೇದಾಯಿತು”. ಮತ್ತೆ ಸ್ವಲ್ಪ ಕೋಪಗೊಂಡ ರಾಜ, ಅದು ಹೇಗೆ ಎಂದು ಪ್ರಶ್ನಿಸಿದ. “ಲೇ ಹುಚ್ಚ, ನೀನು ನನ್ನನ್ನು ಇಲ್ಲಿ ಬಂಧಿಸದಿದ್ದಿದ್ದರೆ, ಅವಶ್ಯವಾಗಿ ನಿನ್ನ ಜೊತೆಗೆ ನನ್ನನ್ನು ಇಂದಿನ ಬೇಟೆಗೆ ಕರೆದೊಯ್ಯುತ್ತಿದ್ದೆ. ನನ್ನ ಎಲ್ಲ ಅಂಗಗಳು ಸರಿಯಾಗಿವೆ. ಆ ನರಮಾಂಸ ಭಕ್ಷಕರು ನಿನ್ನನ್ನು ಬಿಟ್ಟು ನನ್ನನ್ನು ತಿಂದು ಬಿಡುತ್ತಿದ್ದರು ಅಷ್ಟೇ” ಎಂದ.
ಜೀವನದಲ್ಲಿಯೂ ಹೀಗೆ, ಆಗುವುದೆಲ್ಲಾ “ಒಳ್ಳೆಯದಕ್ಕೇ”. ಸಹನೆ ಇದ್ದರೆ ಅರಿವಾದೀತು.